Wednesday 13 April 2016

ಅನೈತಿಕ ಸಂಬಂಧದಲ್ಲೂ ಭಾವನೆಗಳಿವೆಯ?

ಅದು ಈ ಸಮಾಜದ ಮಟ್ಟಿಗೆ ಅಸಹ್ಯವೇ. ಅದನ್ನು ಅಷ್ಟು ಸುಲಭಕ್ಕೆ ಯಾರು ಒಪ್ಪಿಕೊಳ್ಳುವುದು ಇಲ್ಲ. ಒಂದೊಮ್ಮೆ ಒಪ್ಪಿಕೊಂಡರೂ ಅಲ್ಲಿ ಅರೆಬರೆ ಮನಸ್ಸೇ ಇರುತ್ತದೆ.ಇದೂ ಒಂದು ಸಂಬಂಧವಾ ಎನ್ನುವ ಪ್ರಶ್ನೆ ಎಲ್ಲರ ಮನಸ್ಸಿನಲ್ಲಿರುತ್ತದೆ.
   ಯಾಕೆಂದರೆ ಅದೊಂದು ಅನೈತಿಕ ಸಂಬಂಧ!
      ಇಂತಹ ಸಂಬಂಧವೊಂದು ಹುಟ್ಟಿಕೊಳ್ಳುವುದು ಹೇಗೆ?  ಅದು ಬೆಸೆದುಕೊಳ್ಳುವುದು ಹೇಗೆ?  ಸಹಜವಾಗಿಯೇ ನಾವು ಇಲ್ಲಿ ದೇಹದ ಆಕರ್ಷಣೆಯೇ ಎಲ್ಲವೂ ಆಗಿರುತ್ತದೆ ಎಂದುಕೊಳ್ಳತ್ತೆವೆ. ಅಂದರೆ ಇಲ್ಲಿ ಭಾವನೆಗಳು ಮುಖ್ಯವಾಗುವುದಿಲ್ಲ. ಅದು ಮದುವೆಗೆ ಮುಂಚಿನ ಸಂಬಂಧವೇ ಆಗಲಿ, ಮದುವೆಯ ನಂತರ ಹುಟ್ಟಿಕೊಳ್ಳುವ ಸಂಬಂಧವೇ ಆಗಲಿ, ಅಲ್ಲಿ  ದೇಹದ ಸೆಳೆತವೇ ಮುಖ್ಯವಾಗಿರುತ್ತದೆ ಎನ್ನುವುದು ನಮ್ಮ. ಭಾವನೆ. ಆದ್ದರಿಂದಲೇ ಅದು ಯಾವುದೇ ರೀತಿಯ ಅನೈತಿಕ ಸಂಬಂಧವಾದರೂ ಶಾಶ್ವತವಲ್ಲ,  ಕ್ಷಣಿಕವಾದದ್ದು ಎಂದೇ ನಾವು ಯೋಚಿಸುತ್ತೇವೆ
   ಇದು ಎಷ್ಟು ಸರಿ?  ಅಲ್ಲಿ ದೇಹಗಳನ್ನು ಮಾತನಾಡಿಕೊಳ್ಳುವಿಕೆ ಮಾತ್ರವೇ ಇರುತ್ತದೆ, ಮನೆಸ್ಸೇನಿದ್ದರೂ ಗೈರು ಹಾಜರಾಗಿರುತ್ತದೆ ಎಂದು ನಾವೇಕೆ ನಿರ್ಧರಿಸುತ್ತೆವೆ? ಯಾಕೆಂದರೆ ನಾವು  ಭಾವನೆಗಳೇನಿದ್ದರು ಸಹಜವಾದ,  ಸಮಾಜ ಒಪ್ಪಿಕೊಳ್ಳುವಂತಹ ಸಂಬಂಧಗಳಲ್ಲಿ ಮಾತ್ರವೇ ಇರುತ್ತದೆ ಎಂದು ಭಾವಿಸುತ್ತೇವೆ. ಅದು ಗಂಡ - ಹೆಂಡತಿ, ಅಣ್ಣ -ತಮ್ಮ, ಅಕ್ಕ-ತಂಗಿ,  ಸ್ನೇಹಿತರು, ನಿಜವಾದ ಪೇಮಿಗಳು, ಈ ಸ್ನೇಹ ಪ್ರೀತಿಯನ್ನೂ ಮೀರಿದಂತಹ ಯಾವುದೇ ರೀತಿಯ ಸಂಬಂಧವಾದರೂ ಅಲ್ಲಿ ಮಾತ್ರವೇ ಭಾವನೆಗಳಿರುತ್ತವೆ ಎನ್ನುವುದು ನಮ್ಮ ಲೆಕ್ಕಾಚಾರ.
    ಒಂದಂತೂ ನಿಜ, ನಮ್ಮೆಲ್ಲರ ಬದುಕು ಬೆಸೆದುಕೊಳ್ಳುವುದು,ಬೆಳೆಯುವುದು ಇದೇ ಭಾವನೆಗಳ ಮೇಲೆ. ಒಂದು ಮನೆ ಕಟ್ಟಲು ತಳಹದಿ ಎಷ್ಟು ಮುಖ್ಯವೋ, ಹಾಗೇ ಬದುಕು ನೆಮ್ಮದಿಯಾಗಿರಲು,ಖುಷಿಯಿಂದಿರಲು ಈ ಭಾವನೆಗಳೇ ಮುಖ್ಯವಾಗಿರುತ್ತವೆ. ಒಂದೊಮ್ಮೆ  ಭಾವನೆಗಳೇ ಇಲ್ಲದೇ ಹೋದರೆ? ಬಹುಶಃ ನಮ್ಮ ಬದುಕನ್ನು ಸುಮ್ಮನೆ ಕೂಡ ಕಲ್ಪಿಸಿಕೊಳ್ಳಲಿಕ್ಕೂ ಸಾಧ್ಯವಾಗುವುದಿಲ್ಲವೇನೋ. ಈಗ ನಿಮ್ಮ ಯಾವುದಾದರೂ ಸ್ನೇಹ ಸಂಬಂಧವನ್ನೆ ತೆಗೆದುಕೊಳ್ಳಿ. ನೀವಿಬ್ಬರೂ ಯಾಕೆ ಸ್ನೇಹಿತರಾಗದ್ದೀರಿ? ಇಲ್ಲಿ ದೇಹದ ಆಕರ್ಷಣೆಯಂತೂ ಇರುವುದಿಲ್ಲ. ನಿಮ್ಮಿಬ್ಬರ ಸಮಾನ ಅಭಿರುಚಿ, ಆಸಕ್ತಿ, ಒಂದೇ ರೀತಿ ಯೋಚಿಸಿವ ಗುಣಗಳು ನಿಮ್ಮನ್ನು ಹತ್ತಿರ ತಂದಿರುತ್ತವೆ. ನಿಮ್ಮಿಬ್ಬರ ನಡುವೆ ಸ್ನೇಹ ಹುಟ್ಟಿಕೊಳ್ಳಲು ಕಾರಣವಾಗುತ್ತದೆ. ಇದೇ ಕಾರಣದಿಂದಲೆ ನಿಮ್ಮ. ಸ್ನೇಹಿತ ಕಷ್ಟದಲ್ಲಿದ್ದಾನೆ ಎಂದರೆ ನೀವು  ನೊಂದುಕಳ್ಳುತ್ತಿರಿ.ಅವನ ಕಷ್ಟವನ್ನು ನನ್ನದೇ ಎಂದುಕೊಂಡು ಅವನೊಂದಿಗೆ ನಿಲ್ಲತ್ತಿರಿ. ಇಲ್ಲಿ  'ನನ್ನದು' ಎನ್ನುವಂತಹ ಯೋಚನೆ ಇರುವುದಿಲ್ಲ.  'ನಮ್ಮದು' ಎನ್ನುವ ಯೋಚನೆಗೆ ನಮ್ಮ ಮನಸ್ಸಿನ ಭಾವನೆಯೇ ಕಾರಣವಾಗಿರುತ್ತದೆ.
   ಇಂತಹ ಭಾವನೆಗಳೇ ನಮ್ಮ ಬದುಕನ್ನು ನೆಮ್ಮದಿಯಾಗಿಟ್ಟಿರುತ್ತದೆ. ಅಂದರೆ  ಇಲ್ಲಿ  'ನನ್ನವರು'  ಎನ್ನುವ ಭಾವನೆಯೊಂದು ನಮ್ಮೆಲ್ಲರ ಸಂಬಂಧಗಳಲ್ಲೂ ಹರಿದಾಡುತ್ತಿರುತ್ತದೆ. ಏನೋ ಕಷ್ಟ ಬಂತು, ನಾನೊಬ್ಬನೇ.  ನನಗ್ಯಾರೂ ಇಲ್ಲ ಎನ್ನುವುದೆಲ್ಲ ನಮ್ಮ ಮನಸ್ಸಿನಲ್ಲಿ ಬರುವುದೇ ಇಲ್ಲ. ಯಾಕೆಂದರೆ ನನಗೆ ನನ್ನವರು ಎನ್ನುವವರು ಯಾರೊ
ಇದ್ದಾರೆ ಎಂದು ಮನಸ್ಸು ಯೋಚಿಸುವಂತೆ ಮಾಡುತ್ತದೆ. ಹೀಗೆ ಯೋಚಿಸಲು ಕಾರಣವಾಗುವುದು ನಮ್ಮ ಮನಸ್ಸಿನಲ್ಲಿರುವ ಭಾವನೆ. ಇದು ನಮ್ಮ ಬದುಕನ್ನು 'ಸೆಕ್ಯೂರ್ಡ' ಎನ್ನುವಂತಹ ಸ್ಥಿತಿಯಲ್ಲಿಟ್ಟಿರುತ್ತದೆ.ಮತ್ತು ಇದೇ ನಮ್ಮ ಬದುಕಿನ ನೆಮ್ಮದಿ, ಸುಖ, ಶಾಂತಿಗೆ ಕಾರಣವಾಗುತ್ತದೆ.
   ಒಂದೊಮ್ಮೆ 'ನನಗೆ ಯಾರು ಇಲ್ಲ, ಈ ಬದುಕಿನಲ್ಲಿ ನಾನು  ಒಂಟಿ. ನನಗೆ ಏನಾದರೂ ಯಾರೂ ಕೇಳುವವರು ಇಲ್ಲ ' ಎನ್ನುವಂತಹ ಯೋಚನೆಯೊಂದು ನಿಮ್ಮ ಮನಸ್ಸಿನಲ್ಲಿ ಒಂದು ಕ್ಷಣ
ಹಾದು ಹೋದರೆ ಹೇಗಿರಬಹುದು ಯೋಚಿಸಿ. ಎಷ್ಟೊಂದು ಬ್ಲಾಂಕ್ ಅನ್ನಿಸಿಬಿಡುತ್ತದೆ. ನಾನು ಇಲ್ಲಿ ಯಾಕಿರಬೇಕು ಎನ್ನುವ ಭಾವನೆ ದಟ್ಟವಾಗುತ್ತದೆ.  ಅಂದರೆ ಇಲ್ಲಿ ಭಾವನೆಗಳ ಕೊರತೆಯಿರುತ್ತದೆ. ಇಲ್ಲದೆ ಹೋದರೆ 'ನಾನು' ಎನ್ನುವ ಅಹಂ ಇರುತ್ತದೆ. ಆದ್ದರಿಂದಲೇ ಕೆಲವೊಮ್ಮೆ ನಾವು ಎಲ್ಲಾ ಸಂಬಂಧಗಳಿಂದಲೂ ದೂರವಾಗಿ ಒಂಟಿಯಾಗಿದ್ದು ಬಿಡುತ್ತೇವೆ. ಹಾಗೆಂದು ಒಂಟಿಯಾಗಿರುವವರೆಲ್ಲರೂ ಇದೇ ಕಾರಣದಿಂದ ದೂರವಾಗಿರುತ್ತಾರೆ ಎಂದೇನಿಲ್ಲ. ಅಹಂ ಎನ್ನುವುದಕ್ಕಿಂತ ಹೆಚ್ಚಾಗಿ, ಸಂಭಂಧವೆನ್ನುವುದು ರೂಪುಗೊಂಡ ಭಾವನೆಯೇ ಮೋಸ ಮಾಡಿರಬಹುದು, ನೋವು ಕೊಟ್ಟಿರಬಹುದು, ಕೊನೆಯೇ ಆಗದ ಕಣ್ಣೀರಿಗೂ ಕಾರಣವಾಗಿರಬಹುದು, ಭಾವನೆಗಳಿಂದಲೇ ಕೆಲವರು ಹೀಗೆ ಒಂಟಿಯಾಗಿರುವ ಸಾಧ್ಯತೆಗಳೂ ಇರುತ್ತದೆ.
  ಇಂತಹ ಸಂಬಂಧಗಳಲ್ಲಿ ಭಾವನೆಯೇ ಮುಖ್ಯ,  ಆದ್ದರಿಂದಲೇ 'ನಾವು, ನಮ್ಮದು' ಎನ್ನವುದಿರುತ್ತದೆ. ಇದನ್ನು 'ಅನೈತಿಕ' ಎನ್ನುವಂತಹ ಸಂಬಂಧದಲ್ಲಿ ಹೇಗೆ ತಾನೇ ನಿರೀಕ್ಷಸುತ್ತೀರಿ? ಸಾಧ್ಯವೇ ಇಲ್ಲ ಎಂದು ಇದನ್ನು  ಸುತರಾಂ ಒಪ್ಪಿಕೊಳ್ಳದೇ ಇರುವರು ವಾದಿಸಬಹುದು. ದೇಹದ ಆಕರ್ಷಣೆ ಮಾತ್ರವೇ ಅನೈತಿಕ ಸಂಬಂಧಕ್ಕೆ ಕಾರಣವೆಂದುಕೊಂಡಗ. ಇದನ್ನು ಒಪ್ಪಿಕೊಳ್ಳಬಹುದಾದರೂ ಎಲ್ಲ ಅನೈತಿಕ ಸಂಬಂಧಗಳೂ ಇದೊಂದೇ ಕಾರಣದಿಂದ ಹುಟ್ಟಿಕೊಂಡಿರುವುದಿಲ್ಲ. ಅಲ್ಲಿಯೂ ಭಾವನೆಗಳೇ ಮಖ್ಯವಾಗಿರುತ್ತದೆ. ಭಾವನೆಯ ತಳಹದಿಯ ಮೇಲೆ ಒಂದು ಅನೈತಿಕ ಸಂಬಂಧದ ಹೂವು ಅರಳಿಕೊಂಡು ಬಿಡುತ್ತದೆ.
   ಅವನಿಗೆ ಮದುವೆಯಾಗಿದೆ. ನಾಲ್ಕೈದು ವರ್ಷದ ಮಗುವೂ ಇದೆ. ಸಮಾಜದ ಕಣ್ಣಿಗೆ ಹೆಂಡತಿ ಸುಂದರಿ. ಎಲ್ಲರೊಂದಿಗೂ ನಗುನಗುತ್ತಾ ಮಾತನಾಡುವವಳು. ಇಂತಹ ಹೆಂಡತಿ ಇರುವಾಗ ಅವನು ಬೇರೆಯವರ ಬಗ್ಗೆ ಹೇಗೆ ತಾನೇ ಯೋಚಿಸುತ್ತಾನೆ ಎಂದೇ ಎಲ್ಲರೂ ಅಂದುಕೊಂಡಿರುತ್ತಾರೆ. ಆದರೆ ಅವನು ಮದುವೆಯ ನಂತರ, ಹೆಂಡತಿ ಇರುವಗಲೇ ಇನ್ನೊಂದು ಹೆಣ್ಣಿನ ಜೊತೆ ಸಂಬಂಧವಿಟ್ಟುಕೊಂಡು ಬಿಡುತ್ತಾನೆ. ಇದ್ಯಾತರ ಸಂಬಂಧ?  ನೋಡುವ ಕಣ್ಣಿಗೆ ಇದು ದೈಹಿಕ ಆಕರ್ಷಣೆಯಿಂದ ಹುಟ್ಟಿದ ಸಂಬಂಧವೇ. ಅಂದಮೇಲೆ ಅಲ್ಲಿ ಭಾವನೆಗಳು ಇರಲು ಹೇಗೆ ಸಾಧ್ಯ?
  ಇದು ಸಮಾಜದ ತೀರ್ಮಾನವಷ್ಟೇ. ಆದರೆ ಹಾಗಿರುವುದಿಲ್ಲ .ಅವನಿಗೆ ದೈಹಿಕ ಸುಖಕ್ಕೆ ಮನೆಯವರು ನೋಡಿ, ತಾನು ಒಪ್ಪಿಕೊಂಡು ಮದುವೆಯಾದ ಹೆಂಡತಿಯಿರುತ್ತಾಳೆ. ಆದರೆ ಅವಳು ಇವನ ಭಾವನೆಗೆ ಸ್ಪಂದಿಸುವ ರೀತಿ? ಅದು ಕಲ್ಲಿನೆದುರು ಮನಸ್ಸನ್ನು ಬಿಚ್ಚಿಟ್ಟಂತೆ. ಅವಳಿಗೆ  ಇವನ ಮನಸ್ಸು,ಭಾವನೆ ಮುಖ್ಯವಾಗಿರುವುದಿಲ್ಲ. ಅವನೆಷ್ಟು ದುಡಿಯುತ್ತಾನೆ,ಅದರಲ್ಲಿ ಏನು ತರುತ್ತಾನೆ,ಎಷ್ಟು ಕುಡಿಸುತ್ತಾನೆ ಎನ್ನುವುದಷ್ಟೇ ಮುಖ್ಯವಾಗಿರುತ್ತದೆ ಬಿಟ್ಟರೆ ಅವಳಿಗೆ ಇವನ ಭಾವನೆಗಳ ಪರಿಚಯವೇ ಇರುವುದಿಲ್ಲ. ಆಸೆ ಪಟ್ಟಾಗ ಇಬ್ಬರೂ ದೈಹಿಕವಾಗಿ ಸೇರುತ್ತಾರೆ. ಅದರ ಗುರುತಿಗೆ ಒಂದು ಮಗುವು ಇದೆ ಬಿಟ್ಟರೆ, ಇವರಿಬ್ಬರ 'ನೈತಿಕ' ಎನ್ನುವಂತಹ ಸಂಬಂಧದಲ್ಲಿ ಭಾವನೆ ಬರ ಬಿದ್ದು ಹೋಗಿರುತ್ತದೆ. ಆದ್ದರಿಂದಲೇ ಅವನು ತನ್ನ ಮನಸ್ಸು - ಭಾವನೆಗಳಿಗಾಗಿ ಇನ್ನೊಬ್ಬಳಿಗೆ ಹತ್ತಿರವಾಗುತ್ತಾನೆ. ಸಮಾಜದ ಕಣ್ಣಿಗೆ ಅದು ಅನೈತಿಕ ಅನ್ನಿಸಿರುತ್ತದೆ.ಆದರೆ ಅವರಿಗೆ ಅದೇ ನೈತಿಕವಾಗಿರುತ್ತದೆ
  ಸಮಾಜದ ಕಣ್ಣಿಗೆ ಅನೈತಿಕವೆಂದು ಕಾಣುವ ಹೆಚ್ಚಿನ ಸಂಬಂಧಗಳಲ್ಲಿಯೂ 'ನಾವು ನಮ್ಮದು' ಎನ್ನುವಂತಹ ಭಾವನೆಯೇ  ಇರುತ್ತದೆ. ಜೊತೆಗೆ ಬೇರೆಲ್ಲ ಸಂಬಂಧಗಳಲ್ಲಿರುವಂತಹ ತೀವ್ರತೆಯೇ ಇಲ್ಲಿಯೂ ಇರುತ್ತದೆ. ಆದ್ದರಿಂದಲೇ ಅವರು ಇಲ್ಲಿ ಒಬ್ಬರಿಗೆ ನೋವಾದರೆ ಇನ್ನೊಬ್ಬರು ಕಣ್ಣೀರಗುತ್ತಾರೆ. ನೊಂದುಕೊಳ್ಳುತ್ತಾರೆ. ಹಾಗೆಂದು ಎಲ್ಲಾ ಸಂಬಂಧಗಳಲ್ಲಿಯೂ ಇದನ್ನು ನಿರೀಕ್ಷಿಸುವುದು ತಪ್ಪಗಿಬಿಡುತ್ತದೆ. ಕೇವಲ ಹಣದ ಆಸೆಗಾಗಿ, ದೈಹಿಕ ಸುಖಕ್ಕಾಗಿ, ಪ್ರತಿಷ್ಠೆಯ ತೆವಲಿಗಾಗಿ ಅನೈತಿಕ ಸಂಬಂಧಗಳು ಹುಟ್ಟಿಕೊಳ್ಳುತ್ತವೆ. ಮತ್ತು ಅದು ತೀರಿದ ಮೇಲೆ ಮುಗಿದು ಹೋಗುತ್ತದೆ. ಇದು ಸಮಾಜ ನೈತಿಕ ಎಂದು ಕರೆಯುವ ಸಂಬಂಧದಲ್ಲಿ ಆಗುವುದೇ ಇಲ್ಲವಾ? ಸಮಾಜವೇ ಸಾಕ್ಷಿಯಾಗಿ ನಿಂತು ಜೊತೆ ಮಾಡಿಸಿದ ಎಷ್ಟೋ ಸಂಬಂಧಗಳು ಭಾವನೆಯೇ ಇಲ್ಲದೇ ಕೋಲೆ,  ಆತ್ಮಹತ್ಯೆಯಲ್ಲಿ ಕೊನೆಯಾಗುವುದಿಲ್ಲವಾ?
ನಿಜ, ಈ ಬದುಕಿಗೆ ಭಾವನೆಯೇ ಮುಖ್ಯ.ಭಾವನೆಯಿಲ್ಲದ ಬದುಕನ್ನು ಕಲ್ಪಿಸಿಕೊಳ್ಳುವುದು ಸಾಧ್ಯವೇ ಇಲ್ಲ. ಅಲ್ಲಿ ನೈತಿಕ, ಅನೈತಿಕ ಎನ್ನುವುದು ಮುಖ್ಯವಾಗದೇ ಮನುಷ್ಯ, ಮನಸ್ಸು ಹಾಗೂ ಅದು ಯೋಚಿಸುವ ರೀತಿ ಮಾತ್ರವೇ ಮುಖ್ಯವಾಗುತ್ತದೆ 😍 😄 😒

ಉತ್ತಮ್ ದಾನಿಹಳ್ಳಿ

(ಮೇ 2013 ರ "ಮಾನಸ" ಪತ್ರಿಕೆಯಲ್ಲಿ ಪ್ರಕಟವಗಿದ್ದ ಲೇಖನ)